ಸಿದ್ಧಲಿಂಗಸ್ವಾಮಿ
	1885-1952. ಅಭಿನವ ಜಕಣಾಚಾರ್ಯರೆಂದು ಪ್ರಸಿದ್ಧರಾಗಿದ್ದ ಕರ್ನಾಟಕದ ಖ್ಯಾತ ಶಿಲ್ಪಿಗಳಲ್ಲೊಬ್ಬರು. ಇವರು ಚಾಮರಾಜನಗರ ತಾಲ್ಲೂಕಿನ ಬೆಂಡರವಾಡಿ (ತಾಯಿಯ ಊರು) ಗ್ರಾಮದಲ್ಲಿ 1885ರಂದು ಜನಿಸಿದರು. ಅಂದು ನಂಜುಂಡ ಶಿವಯೋಗೀಂದ್ರ ಸ್ವಾಮಿಗಳು ಆ ಊರಿಗೆ ಆಕಸ್ಮಿಕವಾಗಿ ಬಂದಿದ್ದು ಮಗುವಿಗೆ ಸಿದ್ಧಲಿಂಗ ಸ್ವಾಮಿ ಎಂದು ನಾಮಕರಣ ಮಾಡಿದರು. ಇವರ ತಂದೆ ಸಿದ್ದಪ್ಪಾಜಿ ಸ್ವಾಮಿ, ತಾಯಿ ಮಲ್ಲಾಜಮ್ಮಣ್ಣಿ. ಇವರ ಪೂರ್ವಿಕರು ವಿಜಯನಗರ ದಲ್ಲಿದ್ದವರೆಂದು ತಿಳಿಯುತ್ತದೆ.

	ಇವರು ಗುರುಗಳ ಆಶೀರ್ವಾದದಿಂದ ವಂಶಪಾರಂಪರ್ಯವಾಗಿ ಬಂದ ವೇದ, ಶಿಲ್ಪ, ಮಂತ್ರಶಾಸ್ತ್ರ, ಜ್ಯೋತಿಷ ಮುಂತಾದ ವಿದ್ಯೆಗಳನ್ನು ತಮ್ಮ ತಂದೆಯವರಿಂದಲೂ ಪ್ರಸಿದ್ಧ ಶಿಲ್ಪಿಗಳೂ ಮಂತ್ರ ಶಾಸ್ತ್ರವೇತ್ತರೂ ಆದ ಇವರ ದೊಡ್ಡಪ್ಪ ಸಿದ್ಧಲಿಂಗಸ್ವಾಮಿಗಳಿಂದಲೂ ಅಭ್ಯಾಸ ಮಾಡಿದರು. ಇವರು ತಮ್ಮ ತಂದೆಯವರನ್ನೂ ದೊಡ್ಡಪ್ಪನವರನ್ನೂ ಕಳೆದುಕೊಂಡ ಸಂದರ್ಭದಲ್ಲಿ ಗುರುಗಳಾದ ನಂಜುಂಡ ಶಿವಯೋಗೀಂದ್ರ ಸ್ವಾಮಿಗಳು ಇವರಿಗೆ ಧೈರ್ಯ ಉತ್ಸಾಹವನ್ನು ತುಂಬಿ ವಿದ್ಯಾಭ್ಯಾಸದಲ್ಲಿ ಮುಂದುವರಿಯಲು ನೆರವಾದರು. ಗುರುಗಳ ಆಶೀರ್ವಾದದಿಂದ ಇವರು ದಾರು, ಶಿಲಾ, ಲೋಹ, ಮೃತ್ತಿಕೆ ಮುಂತಾದ ಮೂರ್ತಿಶಿಲ್ಪದಲ್ಲೂ ಚಿತ್ರಕಲೆಯಲ್ಲೂ ನೈಪುಣ್ಯಗಳಿಸಿದರು. ಬೆಂಡರವಾಡಿ ಗ್ರಾಮದ ಪಟೇಲ್ ಚನ್ನದೇವಸ್ವಾಮಿ ಅವರ ಪುತ್ರಿ ವೀರಮ್ಮನವರನ್ನು ವಿವಾಹವಾಗಿ ಗೃಹಸ್ಥಧರ್ಮವನ್ನು ಸ್ವೀಕರಿಸಿದರು.

	ನಂಜುಂಡ ಶಿವಯೋಗೀಂದ್ರ ಸ್ವಾಮಿಗಳು ತಮ್ಮ ಮುಖ್ಯ ಗುರುಗಳಾದ ಕರಸ್ಥಲ ನಾಗಲಿಂಗಸ್ವಾಮಿಗಳ ಹೆಸರಿನಲ್ಲಿ ಒಂದು ಮಠವನ್ನು ಸ್ಥಾಪಿಸಲು ತಮ್ಮ ಮೆಚ್ಚಿನ ಶಿಷ್ಯ ಸಿದ್ಧಲಿಂಗಸ್ವಾಮಿಗಳಿಗೆ ತಿಳಿಸಿದರು. ಗುರುಗಳ ಅಪೇಕ್ಷೆಯಂತೆ ಇವರು ಮೈಸೂರಿನ ಮಠವನ್ನು ನಿರ್ಮಿಸಲು ಪ್ರಯತ್ನಪಟ್ಟರು. ಹಗಲಿರುಳು ಶಿಲ್ಪಕೃತಿಗಳನ್ನು ರಚಿಸಿ ಒಂದು ಪುಟ್ಟ ದೇವರಗುಡಿಯ ಅಂಕಣವನ್ನು ಕಟ್ಟಿಸಿದರು. ಅನಂತರ ಅದು ಕ್ರಮೇಣ ಬೃಹತ್‍ಮಠವಾಗಿ ಬೆಳೆಯಿತು.

	ಇವರು ಅನೇಕ ಉತ್ತಮ ಕಲಾಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಬಹು ಮುಖ್ಯವಾದುವನ್ನು ಮೈಸೂರು, ತುಮಕೂರು ಮತ್ತು ಮಂಗಳೂರು ನಗರಗಳಲ್ಲಿ ಕಾಣಬಹುದು. ಇವರು ನಿರ್ಮಿಸಿದ ಪರಶಿವ, ವಿಶ್ವಕರ್ಮನ ಶಿಲಾವಿಗ್ರಹಗಳು ಸುಂದರವಾಗಿವೆ. ಜರ್ಮನಿಯಲ್ಲಿರುವ ಮರದ ಶಂಕರಾಚಾರ್ಯರ ವಿಗ್ರಹ ರಡಾಲ್ಫ್ ಆಟೋ ಎಂಬುವರ ವಿಜ್ಞಾಪನೆಯ ಮೇರೆಗೆ ನಿರ್ಮಿಸಿಕೊಟ್ಟಿದ್ದೆಂದು ತಿಳಿಯುತ್ತದೆ. ಕೃಷ್ಣರಾಜ ಸಾಗರ ಬೃಂದಾವನದಲ್ಲಿರುವ ಕೃಷ್ಣಶಿಲೆಯ ಕಾವೇರಿ ವಿಗ್ರಹ, ಅಲ್ಲಿನ ಅಮೃತಶಿಲೆಯ ರಾಧಾಕೃಷ್ಣ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ದಲ್ಲಿರುವ ನವಗ್ರಹ ದೇವತಾವಿಗ್ರಹಗಳು, ಹಾಸನ ಜಿಲ್ಲೆಯ ಆನೆಕೆರೆ ಗ್ರಾಮದ ಚೆನ್ನಕೇಶವಸ್ವಾಮಿ ವಿಗ್ರಹ, ಶಿಕಾರಿ ಪುರದಲ್ಲಿ ಬಹು ಎತ್ತರವಾದ ಸ್ತಂಭದ ಮೇಲೆ ಕಂಗೊಳಿಸುತ್ತಿರುವ ಗಂಡಭೇರುಂಡ ವಿಗ್ರಹ, ಜೋಗದಲ್ಲಿರುವ ಚಾಮುಂಡೇಶ್ವರಿ ವಿಗ್ರಹ, ದಾವಣಗೆರೆಯ ಶ್ರೀರಾಮ ಸೀತಾಲಕ್ಷ್ಮಣ ಆಂಜನೇಯ ವಿಗ್ರಹಗಳು, ಹಿಂದೂಪುರ ದಲ್ಲಿರುವ ಅಮೃತಶಿಲೆಯ ಕನ್ನಿಕಾಪರಮೇಶ್ವರಿ, ಶ್ರೀರಂಗನಾಥಸ್ವಾಮಿ ವಿಗ್ರಹಗಳು, ಚಿಕ್ಕಮಗಳೂರಿನಲ್ಲಿರುವ ವಿಘ್ನೇಶ್ವರ ವಿಗ್ರಹ, ಕೂಡಲಿ ಶೃಂಗೇರಿ ಸಂಸ್ಥಾನದಲ್ಲಿರುವ ಪಂಚಲೋಹದ ಶಾರದಾ ವಿಗ್ರಹ, ಆಂಧ್ರದ ಗುಂಟೂರು ಜಿಲ್ಲೆಯ ಚಿದಾಲ ಎಂಬಲ್ಲಿರುವ ಕಾಮಾಕ್ಷಿ ವಿಗ್ರಹ, ಮೈಸೂರಿನ ಪರಕಾಲಮಠದಲ್ಲಿರುವ ಕೃಷ್ಣಬ್ರಹ್ಮತಂತ್ರ ಜಯಚಾಮರಾಜ ಒಡೆಯರ ಕಾಲದಲ್ಲಿ ಸ್ಥಾಪಿಸಿದ ಮೈಸೂರು ಅರಮನೆಯ ಕೋಟೆಯ ದೇವಸ್ಥಾನದಲ್ಲಿರುವ ಭುವನೇಶ್ವರಿ, ಚಾಮುಂಡೇಶ್ವರಿ, ರಾಜರಾಜೇಶ್ವರಿ ವಿಗ್ರಹ-ಇವು ಇವರಿಂದ ನಿರ್ಮಿತವಾದ ಸುಂದರ ಶಿಲ್ಪಕೃತಿಗಳು. ಮುಮ್ಮಡಿ ಕೃಷ್ಣರಾಜ ಒಡೆಯರ ಕೋರಿಕೆಯಂತೆ ಇವರು 1950ರಲ್ಲಿ ಚಾಮುಂಡೇಶ್ವರಿ, ರಾಜರಾಜೇಶ್ವರಿ, ಗಾಯಿತ್ರಿ, ಭುವನೇಶ್ವರಿ, ಕಾಳಿಕಾ ಪರಮೇಶ್ವರಿ, ಲಕ್ಷ್ಮೀ ಮತ್ತು ಸರಸ್ವತಿ ಮುಂತಾದ ತೈಲವರ್ಣದ ಬೃಹದಾಕಾರದ ಚಿತ್ರಗಳನ್ನೂ ರಚಿಸಿಕೊಟ್ಟಿದ್ದಾರೆ. ಇವು ಈಗ ಮೈಸೂರು ಅರಮನೆಯ ದರ್ಬಾರ್ ಹಾಲಿನಲ್ಲಿವೆ. 

	ಮೈಸೂರಿನಲ್ಲಿರುವ ಶ್ರೀ ಜಗದ್ಗುರು ಶೈವಶಿಲ್ಪ ಬ್ರಹ್ಮರ್ಷಿ ಗುರುಕುಲಂ ಎಂಬ ಶಿಲ್ಪಶಾಲೆಯನ್ನು ಸ್ಥಾಪಿಸಿದವರೂ ಇವರೇ. ಈ ಆಶ್ರಮ ಕಲಾಪೂರ್ಣವಾಗಿದೆ. ಇಲ್ಲಿರುವ ಚಿತ್ರಶಾಲೆಯಲ್ಲಿ ನಾನಾಬಗೆಯ ನಾನಾವರ್ಣಗಳ ಕಲಾಕೃತಿಗಳು ತುಂಬಿವೆ. ಇಲ್ಲಿರುವ ಶಿಲ್ಪ ವಿದ್ಯಾಲಯ ದಲ್ಲಿ ಸಿದ್ಧಲಿಂಗಸ್ವಾಮಿಗಳ ನೂರಾರು ಶಿಲ್ಪಕೃತಿಗಳಿವೆ. ಈ ವಿಗ್ರಹಗಳು ಇವರ ಶಿಲ್ಪಪ್ರೌಢಿಮೆಯನ್ನು ಸಾರುತ್ತವೆ. ಈ ಗುರುಕುಲದ ಎದುರಿನಲ್ಲಿ ರುವ ಹೊಯ್ಸಳ ಮಾದರಿಯಲ್ಲಿ ಕಟ್ಟಿರುವ ಸುಂದರ ಕಾಮಕಾಮೇಶ್ವರಿ ದೇವಾಲಯವೂ ಇವರ ರಚನೆಯೇ. ಈ ದೇವಾಲಯದ ಭಿತ್ತಿಗಳಲ್ಲಿ ಶಿವಲೀಲೆಗೆ ಸಂಬಂಧಪಟ್ಟ ಅನೇಕ ಸುಂದರ ಶಿಲಾಮೂರ್ತಿಗಳನ್ನು ಕಡೆಯಲಾಗಿದೆ. ಈ ದೇವಾಲಯದ ಮುಂಭಾಗದಲ್ಲಿ ಪ್ರತಿಷ್ಠಾಪಿಸ ಲಾಗಿರುವ ಮಹಾನಂದಿ ವಿಗ್ರಹ ಉನ್ನತಾಕಾರವಾಗಿದೆ. ದೇವಾಲಯದ ಪಕ್ಕದಲ್ಲೇ ಶ್ರೀ ನಾಗಲಿಂಗಸ್ವಾಮಿ ಮಠವಿದೆ.

	ಇವರು ಮಹಾಶಿಲ್ಪಿಗಳೆಂದು ಹೆಸರುಗಳಿಸಿದ್ದಂತೆ ಸಾಹಿತಿಗಳೂ ಕವಿಗಳೂ ಆಗಿದ್ದರು. ಶಿಲ್ಪವಿದ್ಯಾರಹಸ್ಯೋಪನಿಷತ್ ಎಂಬ ಗ್ರಂಥವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಶಿಲ್ಪಸಾರ ಎಂಬುದು ಇವರ ಕವನಸಂಕಲನ. ಇದರಲ್ಲಿ ಶಿಲ್ಪಮಹಿಮೆಯನ್ನು ಪದ್ಯರೂಪದಲ್ಲಿ ರಚಿಸಿದ್ದಾರೆ. ಅಜಪಾಗಾಯತ್ರಿ ಜಪವಿಧಾನಂ ಎಂಬುದು ಇವರ ಮತ್ತೊಂದು ಗ್ರಂಥ. ಸಾಮಾನ್ಯರಿಗೂ ಸುಲಭವಾಗಿ ದೊರೆಯುವಂತೆ ಋಗ್ವೇದಸಂಹಿತೆ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿಸುವಲ್ಲಿಯೂ ಇವರು ವಹಿಸಿದ ಪಾತ್ರ ಬಹುದೊಡ್ಡದು. 

	ಇವರು ಜಗದ್ಗುರು ಕರಸ್ಥಲ ನಾಗಲಿಂಗಸ್ವಾಮಿಗಳ ಮಠದ ಪೀಠಾಧ್ಯಕ್ಷರಾಗಿದ್ದರು. ಇವರ ತರುವಾಯ ಇವರ ಕರಕಮಲಸಂಜಾತರಾದ ಶಿಲ್ಪಿಸಿದ್ಧಾಂತಿ ಮಹದೇವಸ್ವಾಮಿಗಳು ಈ ಮಠದ ಅಧ್ಯಕ್ಷರಾಗಿ ಶಿಲ್ಪಕಲೆಗೆ ಹೆಚ್ಚಿನ ಸ್ಥಾನವನ್ನು ತಂದುಕೊಟ್ಟರು. 	 ಜೀವನದಲ್ಲಿ ಶ್ರದ್ಧೆ, ಆಸಕ್ತಿ, ಗುರುವಿನಲ್ಲಿ ಭಕ್ತಿ ಇವುಗಳನ್ನೇ ತಮ್ಮ ಮೂಲ ಮಂತ್ರಗಳನ್ನಾಗಿಟ್ಟುಕೊಂಡು ಕಲಾಸೇವೆಗೈದ ಇವರು 1952 ಮೇ 2ರಂದು ಮೈಸೂರಿನಲ್ಲಿ ನಿಧನಹೊಂದಿದರು.			
		(ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ